4 ತಿಂಗಳಲ್ಲಿ 61 ಗರ್ಭಿಣಿಯರು, 877 ಶಿಶುಗಳ ಮರಣ.; ಆತಂಕಕಾರಿ ವರದಿ

0

ಕೊವಿಡ್​-19 ಸೋಂಕು ಕಾಲಿಟ್ಟ ಮೇಲೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗುವುದು ಕಷ್ಟವಾಗಿದೆ. ಬೇರೆ ರೋಗಿಗಳಿಗೆ ಸರಿಯಾದ ಸಮಯಕ್ಕೆ ಔಷಧಿ ಸಿಗದೆ ಪರದಾಡಿದ್ದಾರೆ..ಈಗಲೂ ಪರದಾಡುತ್ತಿದ್ದಾರೆ.

ಅದರಲ್ಲೂ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರಿಗಂತೂ ಈ ಕರೊನಾ ಸಿಕ್ಕಾಪಟೆ ಕಾಡಿದೆ. ಇದೀಗ ಮೇಘಾಲಯದಿಂದ ಒಂದು ಆತಂಕಕಾರಿ ವರದಿ ಹೊರಬಿದ್ದಿದೆ. ಕಳೆದ 4 ತಿಂಗಳಲ್ಲಿ ಅಂದರೆ ಏಪ್ರಿಲ್​​ನಿಂದ ಇಲ್ಲಿಯವರೆಗೆ 61 ಗರ್ಭಿಣಿಯರು ಮತ್ತು 877 ನವಜಾತ ಶಿಶುಗಳು ಮೃತಪಟ್ಟಿವೆ.

ಸೂಕ್ತ ಸಮಯದಲ್ಲಿ ಆಸ್ಪತ್ರೆಗಳಿಗೆ ದಾಖಲಾಗಲು ಸಾಧ್ಯವಾಗದೆ..ಸರಿಯಾದ ವೈದ್ಯಕೀಯ ಸೇವೆ ಸಿಗದೆ ಇರುವುದೇ ಸಾವಿಗೆ ಕಾರಣ ಎಂದು ಮೇಘಾಲಯದ ಹಿರಿಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

ಇಡೀ ರಾಜ್ಯದ ಆರೋಗ್ಯ ವ್ಯವಸ್ಥೆ ಕೊವಿಡ್-19 ವಿರುದ್ಧ ಹೋರಾಟದ ಕಡೆ ಗಮನಹರಿಸಿದೆ. ಆದರೆ ಈ ಮಧ್ಯೆ ಶಿಶು ಹಾಗೂ ತಾಯಿಯ ಸಾವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಹಲವು ಗರ್ಭಿಣಿಯರು ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಸಾವಿರ ಶಿಶುಗಳಲ್ಲಿ 34 ಶಿಶುಗಳು ಸಾಯುತ್ತಿವೆ. ಇದಕ್ಕೆ ಮುಖ್ಯ ಕಾರಣ ನ್ಯುಮೋನಿಯಾ. ಹಾಗೇ ಉಸಿರುಕಟ್ಟುವಿಕೆ ಇನ್ನೊಂದು ಕಾರಣ ಎಂದು ಆರೋಗ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕೊವಿಡ್​-19 ಕಂಟೇನ್​ಮೆಂಟ್​ ವಲಯಗಳಿಂದ ಬರುವ ಗರ್ಭಿಣಿಯರನ್ನು ಆಸ್ಪತ್ರೆಗಳು ಬೇಗನೇ ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ. ಕೊವಿಡ್​-19 ತಪಾಸಣೆ ವರದಿ ಇಲ್ಲದೆ ದಾಖಲಿಸಿಕೊಳ್ಳುವುದಿಲ್ಲ ಎನ್ನುತ್ತಿವೆ. ಇದೇ ಕಾರಣಕ್ಕೆ ಸರಿಯಾದ ಸಮಯದಲ್ಲಿ ಅಗತ್ಯ ಚಿಕಿತ್ಸೆ ಸಿಗುತ್ತಿಲ್ಲ ಎಂದೂ ವಿಶ್ಲೇಷಿಸಿದ್ದಾರೆ.

ಆದರೆ ಈ ಸಾವಿನ ಪ್ರಮಾಣವನ್ನು ತಡೆಗಟ್ಟುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗರ್ಭಿಣಿಯರನ್ನು ನಮ್ಮ ಆರೋಗ್ಯ ಇಲಾಖೆಯಿಂದಲೇ ಸಂಪರ್ಕಿಸಿ, ಅವರನ್ನು ಸೂಕ್ತ ರೀತಿಯಲ್ಲಿ ಪೋಷಣೆ ಮಾಡಲಾಗುವುದೂ ಎಂದೂ ಹೇಳಿದ್ದಾರೆ. ಹಾಗೇ, ಗರ್ಭಿಣಿಯರು, ಹೆರಿಗೆಯಾದ ಬಳಿಕ ತಾಯಿ, ಶಿಶುಗಳು ಸಾವನ್ನಪ್ಪಿದ್ದು ಬೇರೆ ಕೆಲವು ರೋಗಗಳಿಂದ ಹೊರತು, ಕೊವಿಡ್​-19ನಿಂದ ಅಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here